ಯುಗ 1-
	 ದೀರ್ಘಕಾಲವನ್ನು (ಅಂದರೆ ಹಲವು ಸಾವಿರ ವರ್ಷಗಳ ಅವಧಿಯನ್ನು) ಅಳೆಯಲು ಬಳಸುವ ಮಾನಕ. ಬದಲಾವಣೆ ಸೃಷ್ಟಿಯ ಧರ್ಮ. ಬದಲಾವಣೆ ಇಲ್ಲದಿರುವಿಕೆ ಸೃಷ್ಟಿಗೆ ವಿರೋಧವಾದುದು. ದಿನದಲ್ಲಿ ಬೆಳಗು, ಸಂಜೆ ಮತ್ತು ರಾತ್ರಿ ಎಂಬ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಂತೆ ಮೂವತ್ತು ದಿನಗಳಿಗೊಂದು ತಿಂಗಳು, ಎರಡು ತಿಂಗಳಿಗೊಮ್ಮೆ ಸಂವತ್ಸರ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಇವು ಮಾನವನಿಂದ ಸೃಷ್ಟಿಸಲ್ಪಟ್ಟ ಹೆಸರುಗಳಷ್ಟೇ ಅಲ್ಲ; ಪ್ರಕೃತಿಯಿಂದ ಏರ್ಪಟ್ಟ ವಿಶೇಷಗಳೂ ಹೌದು. ಹಗಲು, ರಾತ್ರಿ, ಹುಣ್ಣಿಮೆ, ಅಮವಾಸ್ಯೆ, ಬೇಸಗೆ, ಮಳೆ, ಚಳಿಗಾಲ, ಎಂಬಿವೇ ಮುಂತಾದ ಹೆಸರುಗಳನ್ನು ಮಾನವ ತಾನು ಮಾತನಾಡುವ ಭಾಷೆಗೆ ಅನುಸಾರವಾಗಿ ಕಲ್ಪಿಸಿಕೊಂಡಿದ್ದಾನೆ. ಬೆಳಕು-ಕತ್ತಲೆಗಳನ್ನಾಗಲಿ, ಬಿಸಿಲು-ಮಳೆಗಳನ್ನಾಗಲೀ ಮಾನವ ಸೃಷ್ಟಿಸಲಿಲ್ಲ. ಆದುದರಿಂದ ಇವು ತಾವಾಗಿಯೋ ಅಥವಾ ಯಾವುದೋ ಪ್ರಬಲವಾದ ಶಕ್ತಿಯ ಪ್ರೇರಣೆಯಿಂದಲೋ ನಡೆಯತಕ್ಕ ಬದಲಾವಣೆಗಳು ಎಂಬುದಂತೂ ನಿಜ. ಹೀಗೆ ಯಾವಾಗಲು ಬದಲಾಯಿಸುತ್ತಿರುವ ಕಾಲ ಎಂಬ ತತ್ತ್ವದಲ್ಲಿ ಸಂವತ್ಸರಕ್ಕಿಂತಲೂ ದೊಡ್ಡವಾದ ವಿಭಾಗಗಳು ಯಾವುದಾದರೂ ಉಂಟೆ ಎಂಬುದು ತತ್ತ್ವಚಿಂತಕರು ಪ್ರಾಚೀನಕಾಲದಿಂದಲೂ ಕೇಳುತ್ತಿರುವ ಪ್ರಶ್ನೆಯಾಗಿದೆ. ಈ ಮಾತಿಗೆ ಉಂಟು ಎಂಬುದೇ ಪ್ರಾಯಶಃ ಎಲ್ಲ ದೇಶದವರ ಉತ್ತರವಾಗಿದೆ ಎನ್ನಬಹುದು.

	ಸಾಮಾನ್ಯವಾಗಿ ಮಾನವ ಅಥವಾ ಒಂದು ಜನಾಂಗದ ಚರಿತ್ರೆಯನ್ನು ಬರೆಯತಕ್ಕವರು ಸಹ, ಆಯಾಜನರ ನಾಗರಿಕತೆಯ ಬೇರೆ ಬೇರೆ ಅವಸ್ಥೆಗಳನ್ನು ಸೂಚಿಸುವ ಕಲ್ಲಿನ (ಶಿಲಾ) ಯುಗ, ಕಬ್ಬಿಣದ ಯುಗ, ಕಂಚಿನ ಯುಗ, ಸ್ವರ್ಣಯುಗ ಮುಂತಾದ ಶಬ್ದಗಳನ್ನು ಬಳಸುತ್ತಾರೆ. ಮೊಟ್ಟಮೊದಲು ಮಾನವ ಬಹಳ ಅನಾಗರಿಕನಾಗಿದ್ದು ತನ್ನ ಜೀವನಕ್ಕೆ ಬೇಕಾದ ಆಹಾರ ಮುಂತಾದವುಗಳನ್ನು ಬದಗಿಸಿಕೊಳ್ಳಲು ಯಾವ ಬಗೆಯ ಸಾಧನವನ್ನೂ ಬಳಸಲು ತಿಳಿಯದೆ ಇದ್ದು, ಸ್ವಲ್ಪಕಾಲದ ಮೇಲೆ ಆಹಾರಕ್ಕಾಗಿ ಮೃಗಗಳನ್ನು ಕೊಲ್ಲಲು ಕಲ್ಲನ್ನು ಆಯುಧವಾಗಿ ಉಪಯೋಗಿಸಿಕೊಳ್ಳಹತ್ತಿದ. ಈ ಕಾಲವನ್ನು ಇತಿಹಾಸಕಾರರು ಕಲ್ಲಿನಯುಗವೆಂದು ಕರೆದರು. ಹೀಗೆ ಮಾನವನ ಬುದ್ಧಿಬೆಳೆದಂತೆ ನಾಗರಿಕತೆ ಮುಂದುವರಿದಂತೆ ಕಬ್ಬಿಣದ ಯುಗ, ಕಂಚಿನ ಯುಗ, ಸ್ವರ್ಣಯುಗ ಎಂಬ ಲೆಕ್ಕಾಚಾರ ಬೆಳೆಯಿತು.

  	ಒಟ್ಟಿನಲ್ಲಿ ಹೇಳುವುದಾದರೆ ಆದಿಯಲ್ಲಿ ಮಾನವ ಅನಾಗರಿಕನಾಗಿ, ಪಶುಗಳಂತಯೇ ಜೀವನ ನಡೆಸುತ್ತಿದ್ದು, ಕಾಲಾನುಕ್ರಮದಲ್ಲಿ ಸ್ವಲ್ಪಸ್ವಲ್ಪವಾಗಿ ನಾಗರಿಕತೆಯನ್ನು ಬೆಳೆಸಿಕೊಳ್ಳುತ್ತಾ ಬಂದ. ಈಗ ಅದರ ತುದಿಯನ್ನು ಮುಟ್ಟಿರುತ್ತಾನೆ. ಈ ಕಾಲವನ್ನು ನಾಗರಿಕತೆಯ ಬೆಳೆವಣಿಗೆಯ ಅಂತಸ್ತಿಗೆ ತಕ್ಕಂತೆ ವಿಂಗಡಿಸಿಕೊಂಡಿದ್ದಾನೆ ಎಂಬುದು ಸಾರಾಂಶ.

	ಈ ಪ್ರಪಂಚ ಯಾವಾಗಲೋ ಒಂದು ಕಾಲದಲ್ಲಿ ಸೃಷ್ಟಿಯಾಯಿತು ಎಂಬುದನ್ನು ಎಲ್ಲ ತತ್ತ್ವಶಾಸ್ತ್ರಜ್ಞರು, ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಹೀಗೆ ಹುಟ್ಟಿದ ಪ್ರಪಂಚ, ಅದರಲ್ಲಿರತಕ್ಕ ಮೊದಲಾದ ಪ್ರಾಣಿಗಳೂ ಸಹ ಅನೇಕ ವಿಧವಾದ ಮಾರ್ಪಾಟುಗಳನ್ನು ಹೊಂದುತ್ತಲೇ ಇದ್ದು ಕಡೆಗೆ ಒಂದಾನೊಂದು ಸಮಯದಲ್ಲಿ ಪೂರ್ತಿಯಾಗಿ ನಶಿಸಿಯೂ ಹೋಗುವವು. ಇದಕ್ಕೆ ಪ್ರಳಯ ಎನ್ನುತ್ತಾರೆ. ಅನಂತರ, ಇನ್ನೊಂದು ಬಾರಿ ಇವು ಹೊಸದಾಗಿ ಸೃಷ್ಟಿಯಾಗುತ್ತವೆ. ಹೀಗೆ ಸೃಷ್ಟಿ ಮತ್ತು ಬಾರಿ ಪ್ರಳಯಗಳು ಹಗಲು ರಾತ್ರಿಗಳಂತೆ ಬರುತ್ತಲೇ ಇರುತ್ತವೆ ಮತ್ತು ಒಂದು ಬಾರಿ ಸೃಷ್ಟಿಸಲಾದ ಜಗತ್ತಿನಲ್ಲಿ ಜನರ ನಾಗರಿಕತೆ ನೀತಿ ನಡತೆ ಮುಂತಾದವುಗಳ ತಾರತಮ್ಯದಿಂದ ಕೆಲವು ಯುಗಗಳುಂಟಾಗುತ್ತವೆಂದು ಅನೇಕ ತತ್ತ್ವವೇತ್ತರು ಹೇಳುತ್ತಾರೆ.
ಮತ್ತೆ ಕೆಲವರು ಯುಗಗಳನ್ನು ಒಪ್ಪಿಕೊಂಡರೂ ಇವು ಪುನಃ ಪುನಃ ಬರುತ್ತಲೇ ಇರುತ್ತವೆ ಎಂಬುದನ್ನು ಪ್ರಳಯ ಉಂಟು ಎಂಬುದನ್ನು ಒಪ್ಪುವುದಿಲ್ಲ. ಇವರು ಜಗತ್ತು ಯಾವಾಗಲೋ ಸೃಷ್ಟಿಯಾಯಿತು ಎಂಬುದನ್ನು ಒಪ್ಪಿಕೊಂಡರೂ ಒಂದಾನೊಂದು ಕಾಲದಲ್ಲಿ ಇದು ನಾಶವಾಗುತ್ತೆ ಎಂಬುದನ್ನು ಒಪ್ಪುವುದಿಲ್ಲ. ಒಂದು ವೇಳೆ ನಾಶವನ್ನು ಒಪ್ಪಿದರೂ ಪುನರ್ ಸೃಷ್ಟಿಯನ್ನು ಒಪ್ಪುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಅನೇಕ ಬೇರೆ ಬೇರೆ ಮತಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಮುಖ್ಯವಾದ ಕೆಲವು ಮತಗಳ ಅಭಿಪ್ರಾಯ ಪ್ರಸ್ತುತ ಲೇಖನದಲ್ಲಿ ವಿವೇಚಿಸಲಾಗಿದೆ.

	1 ಹಿಂದೂ ಅಥವಾ ವೈದಿಕ: ವೈದಿಕ ವಾಙ್ಮಯದಲ್ಲಿ ಸೃಷ್ಟಿಪ್ರಳಯಗಳ ಮತ್ತು ಯುಗಗಳ ವಿಚಾರ ಬಹಳವಾಗಿ ಕಂಡುಬರುತ್ತದೆ. ಕಾಲ ಅನಾದಿ ಮತ್ತು ಅನಂತ. ಈವರೆಗೆ ಎಷ್ಟೋಬಾರಿ ಪ್ರಪಂಚದ ಸೃಷ್ಟಿಯಾಗಿ ನಾಶಹೊಂದಿರುತ್ತದೆ. ಮುಂದೆಯೂ ಹೀಗೆ ನಡೆಯುತ್ತದೆ. ಒಂದೊಂದು ಸೃಷ್ಟಿಗೂ ಮೊದಲು ಒಂದೊಂದು ಪ್ರಳಯ ಇದ್ದೇ ಇತ್ತೆಂಬುದು ಸಿದ್ಧಾಂತ. ಇದನ್ನು ಅಪ್ಯಯ ಪೂರ್ವಿಕಾ ಸೃಷ್ಟಿಃ ಎಂದು ಹೇಳುವುದು ವಾಡಿಕೆ. ಅಪ್ಯಯವೆಂದು ಪ್ರಳಯಕ್ಕೆ ಹೆಸರು. ಪರಬ್ರಹ್ಮನ ಲಕ್ಷಣವನ್ನು ಹೇಳುವ ಬ್ರಹ್ಮಸೂತ್ರಕಾರ ಬಾದರಾಯಣ ಜಗತ್ತಿನ ಸೃಷ್ಟಿ ಸ್ಥಿತಿಲಯಗಳನ್ನು ಯಾವುದು ನಡೆಸುತ್ತದೆಯೋ ಅದೇ ಪರಬ್ರಹ್ಮ ಎಂದು ಸಾರಿದ. ಇದರಿಂದ ಉಪನಿಷತ್ತುಗಳಲ್ಲಿ ಈ ಸೃಷ್ಟಿ ಪ್ರಳಯಗಳ ವಿಚಾರ. ಎಷ್ಟು ಮುಖ್ಯವೆಂದು ಅರಿಯಬಹುದಾಗಿದೆ. ಉಪನಿಷತ್ತುಗಳಲ್ಲಿ ಸೃಷ್ಟಿಯನ್ನು ವಿವರಿಸುವ ವಾಕ್ಯಗಳನ್ನು ಅನೇಕ ಕಡೆ ನೋಡಬಹುದು. ಉದಾಹರಣೆಗೆ ಛಾಂದೋಗ್ಯ ಉಪನಿಷತ್ತಿನ ಸದ್ವಿದ್ಯ ಎಂಬ ಆರನೆಯ ಪ್ರಪಾಠಕ, ತೈತ್ತೀರಿಯೋಪನಿಷತ್ತಿನ ಆನಂದವಲ್ಲಿ, ಐತರೇಯೋಪನಿಷತ್ತಿನ ಆರಂಭದ ಭಾಗ-ಇವೇ ಮುಂತಾದವು. ಹೀಗೆಯೇ ಪ್ರಳಯಕ್ಕೆ ಸಂಬಂಧಿಸಿದ ವಾಕ್ಯಗಳೂ ಇವೆ.

	ಪುರಾಣಗಳಲ್ಲಿ ಈ ಸೃಷ್ಟಿ ಪ್ರಳಯಗಳ ವರ್ಣನೆ ಹೆಚ್ಚಾಗಿ ಕಂಡುಬರುತ್ತದೆ. ಪುರಾಣಗಳ ಐದು ಲಕ್ಷಣಗಳಲ್ಲಿ ಸೃಷ್ಟಿ, ಪ್ರತಿಸೃಷ್ಟಿ, ಮನ್ವಂತರ ಎಂಬಿವುಗಳೂ ಸೇರಿರುತ್ತವೆ. ಆದುದರಿಂದ ಪ್ರತಿ ಪುರಾಣದಲ್ಲಿಯೂ ಈ ವಿಷಯಗಳ ವರ್ಣನೆ ಇರುತ್ತದೆ. ಮನುಸ್ಮøತಿಯ ಪ್ರಾರಂಭದಲ್ಲಿಯೂ ಪ್ರಳಯಕಾಲ ಕಳೆದ ಮೇಲೆ ಬ್ರಹ್ಮ ಪ್ರಪಂಚವನ್ನೂ ಪ್ರಾಣಿಗಳನ್ನೂ ಸೃಷ್ಟಿಸಿ, ಮಾನವರು ಅನುಷ್ಠಿಸಬೇಕಾದ ಧರ್ಮಗಳ ಉಪದೇಶಕ್ರಮ ವರ್ಣಿತವಾಗಿದೆ.

	ಹೀಗೆ ಒಂದು ಬಾರಿ ಸೃಷ್ಟಿಸಲಾದ ಪ್ರಪಂಚ ಲಯಿಸಬೇಕಾದರೆ ಒಂದು ಕಲ್ಪವೆಂದು ಕರೆಯುವ ಕಾಲ ಬೇಕಾಗುವುದು. ಕಲ್ಪದಲ್ಲಿ ಅನೇಕ ಚತುರ್ಯುಗಗಳಿರುತ್ತವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ನಾಲ್ಕು ಯುಗಗಳ ಗುಂಪಿಗೆ ಚತುರ್ಯುಗಗಳೆಂದು ಹೆಸರು. ಈ ಒಂದೊಂದು ಯುಗದಲ್ಲಿಯು ಸಹ ಮಾನವನ ಶಕ್ತಿ, ನೀತಿ, ಆಯುಸ್ಸು ಮುಂತಾದುವೆಲ್ಲಾ ಮಾರ್ಪಡುತ್ತಲೇ ಇರುತ್ತದೆ. ಈ ಯುಗಗಳ ಕಾಲಪ್ರಮಾಣವನ್ನು ದೇವಮಾನದಿಂದ ಅಳೆಯುವುದು ವಾಡಿಕೆ. ದೇವಮಾನವೆಂದರೆ ದೇವತೆಗಳ ಅಳತೆ ಎಂದರ್ಥ. ಕಾಲವೆಂಬುದು ಒಂದೊಂದು ಲೋಕದಲ್ಲೂ ಬೇರೆ ಬೇರೆ ಪ್ರಮಾಣವುಳ್ಳದ್ದು. ಐನ್‍ಸ್ಟೀನ್‍ನ ಸಾಪೇಕ್ಷವಾದದಲ್ಲು ಸಹ ಸನ್ನಿವೇಶಗಳು ಬದಲಾಯಿಸಿದಂತೆಲ್ಲ ಕಾಲದ ಪ್ರಮಾಣವೂ ಬದಲಾಯಿಸುವುದೆಂದು ನಿರೂಪಿತವಾಗಿದೆ. ಹೀಗಾಗಿ ಮನುಷ್ಯಲೋಕದ ಒಂದು ವರ್ಷ ದೇವಲೋಕದಲ್ಲಿ ಒಂದು ದಿನವೆಂದು ಪರಿಗಣಿತವಾಗಿದೆ. ಈ ಬಗೆಯ 360 ದಿನಗಳನ್ನೊಳಗೊಂಡದ್ದು ದೇವತೆಗಳ ವರ್ಷ. ಕೃತಯುಗದಲ್ಲಿ 4,900 ದೇವ ವರ್ಷಗಳೂ ತ್ರೇತಾಯುಗದಲ್ಲಿ 3.000 ದೇವವರ್ಷಗಳೂ ದ್ವಾಪರಯುಗದಲ್ಲಿ 2,000 ದೇವವರ್ಷಗಳೂ ಮತ್ತು ಕಲಿಯುಗದಲ್ಲಿ 1,000 ದೇವವರ್ಷಗಳೂ ಇರುತ್ತವೆ. ಇದಲ್ಲದೆ, ಒಂದೊಂದು ಯುಗದ ಮೊದಲು ಕಡೆಯಲ್ಲಿ ಆಯಾಯುಗದ ಹತ್ತನೆಯ ಒಂದರಷ್ಟು ಕಾಲ ಯುಗಸಂಧಿಯೆಂಬ ಕಾಲವುಂಟು (ಯುಗದ ಕಡೆಯಲ್ಲಿ ಬರುವ ಸಂಧ್ಯೆಗೆ ಸಂಧ್ಯಾಂಶವೆಂದು ಹೇಳುವುದುಂಟು). ಎಂದರೆ ಹಗಲು ರಾತ್ರಿಗಳು ಕೂಡುವಾಗ ಹೇಗೆ ಮಧ್ಯೆ ಸ್ವಲ್ಪಕಾಲ ಸಂಧ್ಯೆ (ನಸುಗೆಂಪು ಅಥವಾ ಮುಚ್ಚಂಚೆ) ಎಂಬ ಕಾಲ ಹಗಲೂ ಅಲ್ಲದ ರಾತ್ರಿಯೂ ಅಲ್ಲದ, ಎರಡರ ಧರ್ಮವನ್ನು ಸ್ವಲ್ಪಸ್ವಲ್ಪ ಹೊಂದಿರುತ್ತದೆಯೋ ಅದರಂತೆ ಎರಡು ಯುಗಗಳು ಕೂಡುವಾಗ ಸಂಧಿಕಾಲವಿರುವುದೆಂದರ್ಥ. ಕೃತಯುಗಕ್ಕೆ ಮೊದಲಿನಲ್ಲಿಯೂ ಕಡೆಯಲ್ಲಿಯೂ 400-400, ತ್ರೇತಾಯುಗಕ್ಕೆ 300-300, ದ್ವಾಪರಕ್ಕೆ 200-200 ಮತ್ತು ಕಲಿಯುಗಕ್ಕೆ 100-100 ದೇವವರ್ಷಗಳು. ಹೀಗಾಗಿ ನಾಲ್ಕೂ ಯುಗಗಳ ಎಂಟು ಸಂಧ್ಯೆಗಳೂ ಸೇರಿ 2000 ದೇವವರ್ಷಗಳಾಗುತ್ತವೆ. ಒಟ್ಟಿನಲ್ಲಿ ಸಂಧ್ಯೆಗಳೂ ಸೇರಿ ಕೃತಾದಿ ಯುಗಗಳು ದೇವಮಾನದಿಂದ, ಕ್ರಮವಾಗಿ 4800, 3600, 2400 ಮತ್ತು 1200 ವರ್ಷಗಳೂ ಮನುಷ್ಯಮಾನದಿಂದ 07,28,000; 12,96,000; 8,64,000 ಮತ್ತು 4,32,000 ವರ್ಷಗಳೆಂದು ಹೇಳಿದಂತಾಯಿತು. 

	ಈ ಯುಗಧರ್ಮಗಳೂ ಬೇರೆಬೇರೆಯಾಗಿ ವರ್ಣಿಸಲ್ಪಟ್ಟಿವೆ. ಕೃತಯುಗದಲ್ಲಿ ಮಾನವ 400 ವರ್ಷಗಳು ಜೀವಿಸಿದ್ದು ಧರ್ಮವನ್ನು ಪೂರ್ಣವಾಗಿ ಅನುಷ್ಠಿಸುತ್ತಾನೆ. ತ್ರೇತಾದಿ ಮುಂದಿನ ಯುಗದಲ್ಲಿ ಧರ್ಮದ ಒಂದೊಂದು ಪಾದ, ಎಂದರೆ ಕಾಲುಕಾಲು ಭಾಗವು ಕಡಿಮೆಯಾಗುತ್ತಾ ಬರುತ್ತದೆ. ಇದರ ಫಲವಾಗಿ ಮಾನವನ ಆಯುಸ್ಸು ಸಹ ನೂರು ನೂರು ವರ್ಷಗಳಷ್ಟು ಕಡಿಮೆಯಾಗುತ್ತಾ ಬರುತ್ತದೆ. ಹೀಗೆಯೇ ಮಾನವನಿಗೆ ಬೇಕಾದ ಆಹಾರವೇ ಸಿಕ್ಕುತ್ತಿದ್ದವು. ಈ ಸ್ಥಿತಿ ಕ್ರಮೇಣ ಸ್ವಲ್ಪಸ್ವಲ್ಪವಾಗಿ ಕೆಡುತ್ತಾ ಬಂದು ಕಲಿಯುಗದಲ್ಲಿ ಕಷ್ಟಪಟ್ಟು ಬೇಸಾಯ ಮಾಡಿದರೂ ಸಾಕಷ್ಟು ಆಹಾರ ದೊರಕದ ಸ್ಥಿತಿ ಉಂಟಾಗುತ್ತದೆ.

	ಈಗ (1998) ನಡೆಯುತ್ತಿರುವುದು ಕಲಿಯುಗ. ಇದರಲ್ಲಿ 5099 ವರ್ಷಗಳು ಕಳೆದಿವೆ. ಕೃಷ್ಣನ ಅವತಾರ ಸಮಾಪ್ತಿಯಾದ ಕೂಡಲೆ ಈ ಯುಗ ಪ್ರಾರಂಭವಾಯಿತು. ಆಗಲೇ ಧರ್ಮಪುತ್ರನಾದ ಯುಧಿಷ್ಠಿರ ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿ ತಮ್ಮಂದಿರೊಡಗೂಡಿ ಸ್ವರ್ಗಕ್ಕೆ ನಡೆದುದು. ಆಕಾಶದಲ್ಲಿ ಕಾಣುವ ಸಪ್ತರ್ಷಿ ಮಂಡಲ ಆಗ ಮಖನಕ್ಷತ್ರದಲ್ಲಿತ್ತು. ಇದು ಅಲ್ಲಿಂದ ಚಲಿಸಿ ಪೂರ್ವಾಷಾಡಾ ನಕ್ಷತ್ರ ಸೇರಿದಾಗ ಪ್ರಸಿದ್ಧನಾದ ನಂದನೆಂಬ ರಾಜನ ಆಳ್ವಿಕೆ ಪ್ರಾರಂಭವಾಯಿತು. ಅಲ್ಲಿಂದೀಚೆಗೆ ಕಲಿಯ ಪ್ರಾಬಲ್ಯ ಹೆಚ್ಚಾಯಿತು. ಹಾಗಿದ್ದರೂ ಎಲ್ಲಾ ಯುಗಗಳಲ್ಲಿಯೂ ಧರ್ಮಿಷ್ಟರಾದ ನಾಲ್ಕೂ ವರ್ಣದ ಮಹಾಪುರುಷರು ಇರುತ್ತಾರೆ. ಇವರ ಸಂಖ್ಯೆ ಕೃತಯುಗದಲ್ಲಿ ಬಹಳವಾಗಿದ್ದು ಕ್ರಮೇಣ ಕಡಿಮೆಯಾಗುತ್ತಾ ಬಂದು ಕಲಿಯುಗದಲ್ಲಿ ತೀರ ಕಡಿಮೆಯಾಗುತ್ತದೆ; ಎಂದರೆ ಮುಂದಿನ ಕೃತಯುಗದ ಧಾರ್ಮಿಕ ಪ್ರಜಾವರ್ಗಕ್ಕೆ ಬೀಜದಂತೆ ಎಲ್ಲೋ ಕೆಲವು ಮಂದಿ ಮಾತ್ರ ಧರ್ಮಿಷ್ಟರು ಇರುತ್ತಾರೆಂದು ಭಾವ. ಕಲಿಯುಗ ಮುಗಿದು ಪುನಃ ಕೃತಯುಗ ಪ್ರಾರಂಭವಾಗಲು, ಮಧ್ಯದಲ್ಲಿ ಪ್ರಳಯವಾಗಬೇಕಾಗಿಲ್ಲ. ಕಲಿಯುಗದ ಕೊನೆಯಲ್ಲಿ ಭಗವಂತ ಕಲ್ಕಿಯಾಗಿ ಅವತರಿಸಿ, ಅಧರ್ಮಿಗಳನ್ನೆಲ್ಲ ಸಮೂಲವಾಗಿ ನಾಶಮಾಡಿ ಪ್ರಜೆಗಳು ಧರ್ಮದಲ್ಲಿ ಪ್ರವರ್ತರಾಗುವಂತೆ ಮಾಡುತ್ತಾನೆ. ಹೀಗೆ ಕಲಿ ಸಂಪೂರ್ಣವಾಗಿ ನಾಶವಾಗಲು ರಾತ್ರಿ ಕಳೆದ ಮೇಲೆ ಬೆಳಗಾಗುವಂತೆ ಕೃತಯುಗ ಹುಟ್ಟುವುದು. ಆಗ ಅಳಿದುಳಿದ ಪ್ರಜೆಗಳ ಮನಸ್ಸು ಧರ್ಮದಲ್ಲಿ ಪ್ರವೃತ್ತವಾಗುವುದು. ಅವರ ಸಂತಾನವಂತೂ ಕೃತಯುಗದ ಲಕ್ಷಣವನ್ನೇ ಹೊಂದಿರುವುದು. ಕೃತಯುಗ ಪ್ರಾರಂಭವಾಗುವ ದಿನ ಪುಷ್ಯ ನಕ್ಷತ್ರದಲ್ಲಿ ಬೃಹಸ್ಪತಿಯೂ ಚಂದ್ರಸೂರ್ಯರೂ ಏಕರಾಶಿಯಲ್ಲಿ ಸೇರಿರುತ್ತಾರೆ (ವಿಷ್ಣುಪುರಾಣ).

	ಯುಗಗಳೆಲ್ಲವುಗಳ ಸ್ವರೂಪವನ್ನು ವಿಸ್ತಾರವಾಗಿ ವರ್ಣಿಸುವುದರ ಬದಲು ಕಲಿಯುಗ ಒಂದನ್ನು ಮಾತ್ರ ವಿಶದಪಡಿಸುವುದು ಸಾಮಾನ್ಯವಾಗಿ ಪುರಾಣಗಳ ಸಂಪ್ರದಾಯ. ಇದರಿಂದ ಕಲಿಯುಗ ಎಷ್ಟು ಕೆಟ್ಟದೋ ಸತ್ಯಯುಗ ಎಂಬ ಕೃತಯುಗ ಅಷ್ಟೂ ಒಳ್ಳೆಯದೆಂದೂ ತ್ರೇತಾ, ದ್ವಾಪರಗಳಲ್ಲಿ ಧರ್ಮ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆಂದು ತಿಳಿದುಕೊಳ್ಳಬಹುದು. ವಿಷ್ಣುಪುರಾಣದ ನಾಲ್ಕನೆಯ ಅಂಶದ ಕಡೆಯ ಅಧ್ಯಾಯದಲ್ಲಿ, ಆರನೆಯ ಅಂಶದ ಮೊದಲನೆಯ ಅಧ್ಯಾಯದಲ್ಲಿ ಸಹ ಕಲಿಯ ಸ್ವರೂಪ ವಿಶದವಾಗಿ ವರ್ಣಿತವಾಗಿದೆ. ಭಾಗವತದ 12ನೆಯ ಸ್ಕಂಧದ 4ನೆಯ ಅಧ್ಯಾಯದಲ್ಲಿ ಈ ಮುಂದಿನ ವಿವರಗಳನ್ನು ಕಾಣಬಹುದು. ಕಲಿಯುಗದಲ್ಲಿ ಹಣವೇ ಉತ್ತಮ ಕುಲಕ್ಕೆ ಸೂಚಕ; ಕಾಮವೇ ದಾಂಪತ್ಯಕ್ಕೆ ಮೂಲ; ಸ್ತ್ರೀತ್ವವೇ ಉಪಭೋಗಕ್ಕೆ ಕಾರಣ; ಸುಳ್ಳನ್ನಾಡುವುದೇ ವ್ಯವಹಾರದಲ್ಲಿ ಜಯಿಸುವುದಕ್ಕೆ ಉಪಾಯ; ಜನಿವಾರವೇ ಬ್ರಾಹ್ಮಣ್ಯಕ್ಕೆ ಕಾರಣ; ಚಿಹ್ನೆಗಳನ್ನು ಧರಿಸುವುದೇ ಆಶ್ರಯಗಳಿಗೆ ಲಕ್ಷಣ; ಅನ್ಯಾಯವೇ ಜೀವಿತಕ್ಕೆ ಸಾಧನ; ದುರ್ಬಲನಾಗಿರುವಿಕೆಯೇ ವೃತ್ತಿಯಿಲ್ಲದ್ದಕ್ಕೆ ಕಾರಣ; ವಾಕ್ಚಾತುರ್ಯವೇ ಪಾಂಡಿತ್ಯಕ್ಕೆ ಸೂಚಕ; ದರಿದ್ರನಾಗಿರುವುದೇ ಸಾಧುತ್ವಕ್ಕೆ ಕಾರಣ; ಸಾಧುವಿನ ವೇಷವನ್ನು ಧರಿಸಿದವನೇ ಸತ್ಪಾತ್ರ; ದೂರದೇಶದಲ್ಲಿರುವ ನೀರೇ ಪುಣ್ಯ ತೀರ್ಥ. ಈ ಯುಗದಲ್ಲಿ ವೇದೋಕ್ತವಾದ ಧರ್ಮವನ್ನು ಸಂಪಾದಿಸಲು ಕಾರಣವಾದ ವರ್ಣಾಶ್ರಮಾಚಾರಗಳನ್ನು ಅನುಷ್ಠಿಸಲು ಯಾರಿಗೂ ಮನಸ್ಸುಂಟಾಗದು. ಧರ್ಮ ದಾಂಪತ್ಯ ಕ್ರಮವಾಗಲೀ ಸರಿಯಾದ ಗುರುಶಿಷ್ಯಕ್ರಮವಾಗಲಿ ಇರುವುದಿಲ್ಲ. ಯಾವ ಕುಲದಲ್ಲಿ ಹುಟ್ಟಿದವನಾದರೂ ಬಲವುಳ್ಳವನೇ ಯಜಮಾನ; ದೀಕ್ಷೆ, ಪ್ರಾಯಶ್ಚಿತ ಮುಂತಾದ ಕರ್ಮಗಳಿಗೆ ಗೊತ್ತಾದ ಯಾವ ಕ್ರಮವೂ ಇರುವುದಿಲ್ಲ. ಯಾರ ಮನಸ್ಸಿಗೆ ಯಾವುದು ಹೇಗೆ ತೋರುವುದೋ ಅವರಿಗೆ ಅದೇ ಶಾಸ್ತ್ರ. ಸ್ನಾನ, ದೇವರ ಪೂಜೆ ಮುಂತಾದವನ್ನು ಮಾಡದೆಯೇ ಜನರು ಊಟಮಾಡುವರು; ಜನರಲ್ಲಿ ಸ್ವಾರ್ಥಪರತೆ. ಇತರರ ಸ್ವತ್ತನ್ನು ಅಪೇಕ್ಷಿಸುವುದು. ಅನ್ಯಾಯದಿಂದ ಹಣಗಳಿಸಲು ಯೋಚಿಸುವುದು-ಎಂಬಿವೇ ಮುಂತಾದ ದುರ್ಗಣಗಳೂ ತುಂಬಿರುವವು. ಇವುಗಳಿಂದಾಗಿ ಕಲಿಯುಗದ ಜನರಿಗೆ ಸುಖಸಂತೊಷಗಳು ಕಡಿಮೆಯಾಗಿ ವ್ಯಾಧಿ, ದುರ್ಭಿಕ್ಷ, ಹಸಿವು, ಬಾಯಾರಿಕೆ, ಮಿತಿಯಿಲ್ಲದ ಪ್ರಜಾ ವೃದ್ಧಿಯಿಂದುಂಟಾಗುವ ತೊಂದರೆಗಳು. ಅಲ್ಪಾಯುಸ್ಸು-ಮುಂತಾದುವುಗಳು ಹೆಚ್ಚುತ್ತವೆ. ಯಾವ ಸಮಯದಲ್ಲಿ ಧರ್ಮ ಬಹಳವಾಗಿ ಕ್ಷಯಿಸಿ ಹೋಗುವುದೋ ಪಾಷಂಡಧರ್ಮಗಳಲ್ಲಿ ಜನರಿಗೆ ಅಭಿರುಚಿಯುಂಟಾಗುವುದೋ ಯಾವಾಗ ಜನರು ಯಜ್ಞ ಯಗಾದಿಗಳಿಂದ ದೇವರನ್ನು ಪೂಜಿಸುವುದಿಲ್ಲವೋ ಮತ್ತು ಅದರ ನಡೆನುಡಿಗಳು ಬಹಳ ಕೀಳುಮಟ್ಟಕ್ಕೆ ಇಳಿಯುವುವೋ ಆಗ ಕಲಿ ಬಲಿಯಿತೆಂದು ತಿಳಿಯಬೇಕು.

	ಹೀಗೆ ಕಲಿಕಾಲದ ದೋಷಗಳನ್ನೇ ಎತ್ತಿ ಆಡುವ ಪುರಾಣಗಳಲ್ಲಿ ಕೂಡ ಕೆಲವೆಡೆಗಳಲ್ಲಿ ಒಂದು ಬಗೆಯಿಂದ ಈ ಯುಗ ಹೊಗಳಿಕೆ ಗಳಿಸಿದೆ. ವಿಷ್ಣುಪುರಾಣದಲ್ಲಿ ಕಲಿಯ ಒಂದು ಮಹಾತ್ಮ್ಯೆ ಈ ರೀತಿ ವರ್ಣಿತವಾಗಿದೆ-ಕೃತಯುಗದಲ್ಲಿ ಹತ್ತುವರ್ಷಗಳೂ ತ್ರೇತಾಯುಗದಲ್ಲಿ ಒಂದು ವರ್ಷ ಅಥವಾ ದ್ವಾಪರದಲ್ಲಿ ಒಂದು ಮಾಸ ನಡೆಸಿದ ತಪಸ್ಸು, ಬ್ರಹ್ಮಚರ್ಯೆ, ಜಪ ಮುಂತಾದ ಧರ್ಮಕಾರ್ಯಗಳ ಫಲವನ್ನು ಕಲಿಯುಗದಲ್ಲಿ ಒಂದು ಹಗಲು ಮತ್ತು ರಾತ್ರಿ ನಡೆಸಿದ ಮಾತ್ರದಿಂದ ಹೊಂದಬಹುದು. ಧ್ಯಾನ, ಯಜ್ಞ, ಅರ್ಚನೆ ಎಂಬ ಕಷ್ಟಕಾರ್ಯಗಳನ್ನು ಮಾಡಿ ಕೃತಾದಿಯುಗಗಳಲ್ಲಿ ಯಾವ ಫಲವನ್ನು ಮಾನವ ಹೊಂದಬಹುದೋ ಅದನ್ನು ಭಗವನ್ನಾಮಸಂಕೀರ್ತನ ಮಾತ್ರದಿಂದಲೇ ಕಲಿಯುಗದಲ್ಲಿ ಹೊಂದಬಲ್ಲ. ಈ ರೀತಿ ಅಲ್ಪಪ್ರಯತ್ನದಿಂದ ಹೆಚ್ಚು ಪುಣ್ಯಫಲವನ್ನು ದೊರಕಿಸುವುದರಿಂದ ಕಲಿಯುಗವೇ ಶ್ರೇಷ್ಠ ಎನ್ನಲಾಗಿದೆ.

	ಭಾಗವತದಲ್ಲೂ ಈ ರೀತಿ ಹೇಳಿದೆ: ಕೃತಾದಿಯುಗಗಳಲ್ಲಿ ಹುಟ್ಟಿರುವವರು ತಾವು ಕಲಿಯುಗದಲ್ಲಿ ಹುಟ್ಟುವುದಕ್ಕೆ ಆಶಿಸುವರು. ಏಕೆಂದರೆ, ಈ ಯುಗದಲ್ಲಿ ನಾರಾಯಣನಲ್ಲಿ ಭಕ್ತಿಯುಳ್ಳ ಮಹಾತ್ಮರು ಅಲ್ಲಲ್ಲೇ ಹುಟ್ಟುತ್ತಾರೆ; ವಿಶೇಷವಾಗಿ ದ್ರಾವಿಡ ದೇಶದಲ್ಲಿ, ಎಂದರೆ ತಾಮ್ರಪರ್ಣಿ, ಪಲಾರು, ಕೃತಮಾಲಾ, ಕಾವೇರಿ ಮುಂತಾದ ಪುಣ್ಯನದಿಗಳ ದಡದಲ್ಲಿ ಇಂಥ ಭಕ್ತರು ಹೆಚ್ಚಾಗಿ ಅವತರಿಸುವರು. ಮೇಲ್ಕಂಡ ನದಿಗಳ ತೀರ್ಥ ಕುಡಿಯುವವರಿಗೆ ವಿಶೇಷವಾದ ಭಗವದ್ಭಕ್ತಿ ಉಂಟಾಗುವುದು.

	ಕೆಲವು ಪುರಾಣಗಳಲ್ಲಿ ನಾಲ್ಕೂ ಯುಗಗಳ ವರ್ಣನೆ ಇರುವುದುಂಟು. ಭಾಗವತದಲ್ಲಿ ಹೀಗೆ ಹೇಳಿದೆ; ಕೃತಯುಗದಲ್ಲಿ ಧರ್ಮವೆಂಬುದು ಸತ್ಯ, ದಯೆ, ತಪಸ್ಸು, ದಾನಗಳೆಂಬ ನಾಲ್ಕೂಪಾದಗಳಿಂದ ಜನರಲ್ಲಿ ನೆಲೆಗೊಂಡಿರುವುದು. ಪ್ರಾಯಿಕವಾಗಿ ಆಗಿನ ಜನರೆಲ್ಲರೂ ನಿತ್ಯ ಸಂತುಷ್ಟರು, ದಯಾವಂತರು, ಸತ್ಯಸಂಧರು, ಸರ್ವಭೂತಹಿತರು, ಶಾಂತರು, ದೌಂತರು, ಸುಖದುಃಖಾದಿಗಳನ್ನು ಸಹಿಸತಕ್ಕವರು, ಆತ್ಮಾನುಭವದಿಂದ ಆನಂದಿಸತಕ್ಕವರು ಮತ್ತು ಎಲ್ಲವೂ ಭಗವದಾತ್ಮಕ ಎಂಬ ಭಾವನೆಯಿಂದ ಎಲ್ಲದರಲ್ಲಿಯೂ ಸಮೃದ್ಧ ದೃಷ್ಟಿಯಿಟ್ಟಿರತಕ್ಕವರು. ತ್ರೇತಾಯುಗದಲ್ಲಿ ಮೆಲ್ಲಮೆಲ್ಲಗೆ ಧರ್ಮದ ಒಂದು ಪಾಲು ಕಡಿಮೆಯಾಗುತ್ತಾ ಬಂದು ಅಧರ್ಮದ ಪಾದಗಳೆನಿಸಿದ ಸುಳ್ಳು, ಹಿಂಸೆ, ಅಸಂತುಷ್ಟಿ, ಭೂತದ್ರೋಹಗಳೆಂಬ ಈ ನಾಲ್ಕು ಪೀಡೆಗಳು ತಲೆದೋರುವವು. ಆಗಿನ ಜನರಲ್ಲಿ ಪ್ರಾಣಿಹಿಂಸೆ ಮತ್ತು ವಿಷಯಾಸಕ್ತಿ ಇವು ಕಂಡು ಬಂದರೂ ಅವು ಅಧಿಕವಾಗಿರಲಾರವು. ದ್ವಾಪರಯುಗದಲ್ಲಿ ಧರ್ಮದ ಅರ್ಧಭಾಗ ಅಧರ್ಮ ಆಕ್ರಮಿಸಿಕೊಂಡುಬಿಡುವುದು. ಕಲಿಯುಗದಲ್ಲಿ ಮೊದಮೊದಲು ಧರ್ಮದ ನಾಲ್ಕನೆಯ ಒಂದು ಭಾಗ ಉಳಿದುಕೊಂಡಿದ್ದು ಕೊನೆಕೊನೆಗೆ ಅಧರ್ಮ ಹೆಚ್ಚಾಗಲು, ಅದೂ ಕ್ಷಯಿಸಿಹೋಗುವುದು. ಆ ಕಾಲದ ಜನರು ಲೋಭಿಗಳೂ ದುರಾಚಾರಿಗಳೂ ದಯೆಯಿಲ್ಲದವರೂ ನಿಷ್ಕಾರಣ ವೈರಬುದ್ಧಿಯುಳ್ಳವರೂ ಭಾಗ್ಯಹೀನರೂ ವಿಶೇಷವಾಗಿ ಅರ್ಥಕಾಮಾಸಕ್ತರೂ ಆಗಿರುವರು. ಪದ್ಮಪುರಾಣ, ಕ್ರಿಯಾಯೋಗ ಸಾರದ ಇಪ್ಪತ್ತೈದನೆಯ ಅಧ್ಯಾಯದಲ್ಲೂ ಈ ಬಗೆಯ ವರ್ಣನೆಯಿದೆ.

ಹೀಗೆ ಒಂದೊಂದು ಯುಗದಲ್ಲೂ ಮನುಷ್ಯರ ಸ್ವಭಾವ ಬದಲಾಯಿಸಲು ಅವರಲ್ಲಿರತಕ್ಕ ಸತ್ತ್ವ, ರಜಸ್ಸು, ತಮಸ್ಸುಗಳೆಂಬ ಗುಣಗಳು ಕಾಲಪ್ರೇರಿತವಾಗಿ ಹೆಚ್ಚುತ್ತಲೂ ತಗ್ಗುತ್ತಲೂ ಇರುವುದೇ ಕಾರಣವಾಗಿರುತ್ತದೆ. ಮನಸ್ಸು, ಬುದ್ಧಿ, ಇಂದ್ರಿಯಗಳು, ಸತ್ವಗುಣದಿಂದ ಕೂಡಿದ್ದಾಗ ಜನರಿಗೆ ಜ್ಞಾನಮಾರ್ಗದಲ್ಲಿ, ತಪಸ್ಸಿನಲ್ಲಿ, ಧರ್ಮದಲ್ಲಿ ಅಭಿರುಚಿ ಹೆಚ್ಚುವುದು. ಇದೇ ಕೃತಯುಗದ ಲಕ್ಷಣ ಮನುಷ್ಯರಿಗೆ ಕಾಮ್ಯಕರ್ಮಗಳಲ್ಲಿ ಅಭಿರುಚಿ ಬಹಳ ಹೆಚ್ಚಾದಾಗ ರಜೋಗುಣ ಪ್ರಧಾನವಾದ ತ್ರೇತಾಯುಗವೆಂದು ಕಾಮ್ಯಕರ್ಮಾಭಿರುಚಿಯೊಡನೆ ಕಾಮ, ಅಸಂತುಷ್ಟಿ, ದಂಭ, ಅಹಂಕಾರ, ಮಾತ್ಸರ್ಯ ಮುಂತಾದ ದುರ್ಗುಣಗಳೂ ಕಲೆತಿರುವಾಗ ರಜಸ್ತಮೋ ಗುಣಗಳೆರಡರಿಂದಲೂ ಕಲೆತ ದ್ವಾಪರಯುಗವೆಂದು, ಮಾಯೆ, ಸುಳ್ಳು, ಸೋಮಾರಿತನ, ನಿದ್ರೆ, ಹಿಂಸೆ, ಮನೋವ್ಯಾಧಿ, ಶೋಕ, ಮೋಹ, ಭಯ, ಲೋಭ-ಮುಂತಾದುವೇ ಹೆಚ್ಚಿದಾಗ ತಮಃಪ್ರಚುರವಾದ ಕಲಿಯುಗವೆಂದು ತಿಳಿಯಬೇಕು. ಈ ಯುಗದಲ್ಲಿ ಜನರಿಗೆ ವಿವೇಕ ಕಡಿಮೆ; ಭಾಗ್ಯವು ಕಡಿಮೆ. ಆದರೆ ಹಸಿವು, ಕಾಮ ಹೆಚ್ಚು. ಭೋಗಸಾಧನವಾದ ಧನ ಕಡಿಮೆಯಾಗಿ ಕಳ್ಳರು ಹೆಚ್ಚುವರು; ಪಾಷಂಡಿಗಳ ಪ್ರಾಬಲ್ಯ ವೇದಗಳು ಕ್ಷಯಿಸುವವು. ರಾಜರು ಪ್ರಜೆಗಳನ್ನು ಹಿಂಸಿಸಿ ಬಲತ್ಕಾರದಿಂದ ಹಣ ಸುಲಿಯುವರು. ಜನರು, ತಂದೆ ತಾಯಿ, ಒಡಹುಟ್ಟಿದವರು, ನೆಂಟರು, ಸ್ನೇಹಿತರು ಮುಂತಾದ ಯಾರನ್ನೂ ಲಕ್ಷದಲ್ಲಿಡುವುದಿಲ್ಲ. ಹೀಗಾಗಿ ಜನರು ಅನಾವೃಷ್ಟಿ, ದುರ್ಭಿಕ್ಷ, ರಾಜಬಾಧೆಯಿಂದ ಪೀಡಿತರಾಗಿ ಶಾಂತಿ ಇಲ್ಲದೆ ದುಃಖಿಸುವರು. 

ಒಂದೊಂದು ಯುಗವನ್ನೂ ನಾಲ್ಕು ನಾಲ್ಕು ಪಾದಗಳಾಗಿ ವಿಭಾಗಿಸಿರುತ್ತಾರೆ. ಆದರೆ ಇದರಿಂದ ಹೆಚ್ಚಿಗೆ ಪ್ರಯೋಜನವಾಗಿಲ್ಲ.

ನಾಲ್ಕು ಯುಗಗಳನ್ನು ಸೇರಿಸಿ ಚತುರ್ಯುಗ ಅಥವಾ ದೇವಯುಗವೆಂದು ವ್ಯವಹರಿಸುತ್ತಾರೆ. ಇಂಥ ಚತುರ್ಯುಗಗಳು 1000 ಸೇರಿದರೆ ಒಂದು ಕಲ್ಪ ಎನಿಸುವುದು. ಇದು ಚತುರ್ಮುಖ ಬ್ರಹ್ಮನಿಗೆ ಒಂದು ಹಗಲು, ಇದರಲ್ಲಿ 14 ಮನ್ವಂತರ (ನೋಡಿ- ಮನ್ವಂತರ) ಇರುತ್ತದೆ. ಇವುಗಳು ಕಳೆದ ಮೇಲೆ ಒಂದು ಕಲ್ಪ ರಾತ್ರಿ ಇರುತ್ತದೆ. ಎಂದರೆ ಎರಡು ಕಲ್ಪಗಳು ಸೇರಿ ಚತುರ್ಮುಖನಿಗೆ ಒಂದು ದಿನವೆಂದು ಹೇಳಿದಂತಾಯಿತು. ಇಂಥ ದಿನಗಳು 360 ಕಳೆದರೆ ಬ್ರಹ್ಮನಿಗೆ ಒಂದು ವರ್ಷವೆಂತಲೂ ಇಂಥ 100 ವರ್ಷಗಳು ಆತನ ಆಯುಸ್ಸೆಂದೂ ಶಾಸ್ತ್ರಗಳು ತಿಳಿಸುತ್ತವೆ. ಈ ಆಯುಸ್ಸಿಗೆ 'ಪರಾ ಎಂದು ಹೆಸರು. ಇದರ ಅರ್ಧಭಾಗಕ್ಕೆ ಪರಾರ್ಧವೆಂದು ಹೆಸರು. ಬ್ರಹ್ಮನ ದಿನ, ಮಾಸ, ವರ್ಷ, ಆಯುಸ್ಸುಗಳು ಮನುಷ್ಯಮಾನದಿಂದ ಹೀಗಿರುತ್ತದೆ.

	ಬ್ರಹ್ಮನ ಹಗಲು ಅಥವಾ ಕಲ್ಪ: 17,28 (00+12,96,000+8,64,000+4,32,000x1000=4,320,00,000 ವರ್ಷಗಳು. ಬ್ರಹ್ಮನ ದಿವಸ: 43,20,00,000x2=864000000=864 ದಶಲಕ್ಷವರ್ಷಗಳು ಬ್ರಹ್ಮನ ವರ್ಷ: 864 360=3,11,041 ದಶಲಕ್ಷ ವರ್ಷಗಳು ಬ್ರಹ್ಮನ ಆಯುಸ್ಸು ಅಥವಾ ಪರಾ: 3,11040 100=31,104 ಶತಕೋಟಿ ವರ್ಷಗಳು ಪರಾರ್ಧ: 31104 1/2=15,552 ಶತಕೋಟಿ ವರ್ಷಗಳು.

ಬ್ರಹ್ಮನ ಒಂದು ಹಗಲು ತೀರಿದ ಮೇಲೆ ಆತ ಸೃಷ್ಟಿವ್ಯಾಪಾರವನ್ನು ಬಿಟ್ಟು ಶಯನಿಸುತ್ತಾನೆ. ಆ ಸಮಯದಲ್ಲಿ ಪ್ರಳಯವುಂಟಾಗುತ್ತದೆ. ಭೂಲೋಕ, ಬುವರ್ಲೋಕ, ಸುವಲ್ರ್ಲೋಕಗಳೆಂಬ ಮೂರು ಲೋಕಗಳೂ ನಾಶವಾಗಿ ಹೋಗುತ್ತವೆ. ಮಹರ್ಲೋಕದಲ್ಲಿರತಕ್ಕ ಜನರು ಜನಲೋಕಕ್ಕೆ ಹೋಗಿ ಸೇರಿ ಬಿಡುವುದರಿಂದ ಆ ಲೋಕ ಶೂನ್ಯವಾಗಿರುತ್ತದೆ. ಜನಲೋಕ, ತಪೋಲೋಕ, ಸತ್ಯಲೋಕಗಳೆಂಬ ಮೂರು ಲೋಕಗಳಲ್ಲಿ ಮಾತ್ರ ಯಾವ ತೊಂದರೆಯೂ ಇಲ್ಲದೆ ಅಲ್ಲಿಯ ಕಾರ್ಯ ಕಲಾಪಗಳೆಲ್ಲ ಎಂದಿನಂತೆ ಕ್ರಮವಾಗಿ ನಡೆಯುತ್ತಿರುತ್ತದೆ. ರಾತ್ರಿ ಕಳೆದು ಹಗಲಾದ ಮೇಲೆ ಶಯನದಿಂದೆದ್ದು ಬ್ರಹ್ಮ ನಷ್ಟವಾಗಿ ಹೋಗಿದ್ದ ಮೂರು ಲೋಕಗಳನ್ನೂ ಪುನಃ ಸೃಷ್ಟಿಸುವನು. ಇವುಗಳಿಗೆ ನೈಮಿತ್ತಿಕ ಸೃಷ್ಟಿ ಪ್ರಳಯಗಳೆಂದು ಹೆಸರು. ಪರಾ ಎಂಬ ಬ್ರಹ್ಮನ ಆಯಸ್ಸು ಮುಗಿದ ಮೇಲೆ ಸಮಗ್ರ ಬ್ರಹ್ಮಾಂಡವೇ ನಾಶವಾಗಿ ಹೋಗಿ ಎಲ್ಲಾ ತತ್ತ್ವಗಳೂ ತಮ್ಮ ತಮ್ಮ ತತ್ತ್ವಗಳಲ್ಲಿ ಲಯಿಸುತ್ತಾ ಬಂದು. ಕಡೆಗೆ ಮೂಲಪ್ರಕೃತಿ ಮತ್ತು ಜೀವನವೆಂಬ ಎರಡು ತತ್ತ್ವಗಳು ಮಾತ್ರ ಉಳಿದುಕೊಳ್ಳುತ್ತವೆ. ಅನಂತರ ಇವೂ ಪರಮಾತ್ಮನಲ್ಲಿ ಸೇರಿ ಬೇರೆಯಾಗಿ ಕಾಣಲಾರದೆ ಹೋಗುತ್ತದೆ (ಸುಬಾಲೋಪನಿಷತ್ತು). ಈ ಪ್ರಳಯಕ್ಕೆ ಪ್ರಾಕೃತಿಕ ಪ್ರಳಯವೆಂದು ಹೆಸರು. ಇದು ಒಂದು ಪರೆಯಷ್ಟೇ ದೀರ್ಘವಾಗಿರುತ್ತದೆ. ಇದಾದ ಮೇಲೆ ಭಗವಂತ ಪುನಃಸೃಷ್ಟಿಯನ್ನು ಮಾಡಲೆತ್ನಿಸಿ ತನ್ನಲ್ಲಿ ಹುದುಗಿಕೊಂಡಿರುವ ಪ್ರಕೃತಿ ಮತ್ತು ಜೀವರುಗಳನ್ನು ತನ್ನಿಂದ ಬೇರ್ಪಡಿಸಿ ಪ್ರಕೃತಿಯಿಂದ ಮಹಾನ್ ಅಹಂಕಾರ, ತನ್ಮಾತ್ರೆಗಳು, ಪಂಚಭೂತಗಳು ಮುಂತಾದ ತತ್ತ್ವಗಳನ್ನು ಸೃಷ್ಟಿಸಿ ಇವನ್ನೆಲ್ಲ ಸೇರಿಸಿ, ಬ್ರಹ್ಮಾಂಡ ನಿರ್ಮಿಸಿ ಅದರಲ್ಲಿ ಚತುರ್ಮುಖ ಬ್ರಹ್ಮನನ್ನು ಹುಟ್ಟಿಸುತ್ತಾನೆ. ಈವರೆಗಿನ ಸೃಷ್ಟಿಯನ್ನು ಸಮಷ್ಟಿ ಸೃಷ್ಟಿಯೆಂದು ಹೇಳುತ್ತಾರೆ. ಇದಾದ ಮೇಲೆ ಚತುರ್ಮುಖ ದೇವ. ಮನುಷ್ಯ, ತಿರ್ಯಕ್, ಸ್ಥಾವರ ಎಂಬ ನಾಲ್ಕು ವಿಧ ಸೃಷ್ಟಿಯನ್ನೂ ಮಾಡುತ್ತಾನೆ. ಇದಕ್ಕೆ ವ್ಯಷ್ಟಿಸೃಷ್ಟಿಯೆಂದು ಹೆಸರು. ಹೀಗೆ ವ್ಯಷ್ಟಿಷೃಷ್ಟಿಯನ್ನು ಮಾಡತಕ್ಕ ಚತುರ್ಮುಖಬ್ರಹ್ಮ ಒಂದೊಂದು ಪರೆಯಲ್ಲಿಯೂ ಬೇರೆ ಬೇರೆಯಾಗಿರುತ್ತಾನೆ. ಎಂದರೆ ಬೇರೆ ಬೇರೆ ಜೀವ ತನ್ನ ಪುಣ್ಯಪ್ರತಾಪದಿಂದ ಬ್ರಹ್ಮಪಟ್ಟಕ್ಕೆ ಬಂದು ಒಂದು ಪರೆಯನ್ನು ಕಾಲ ಸೃಷ್ಟಿ ವ್ಯಾಪಾರ ನಡೆಸುತ್ತಾನೆಂದು ಅರ್ಥ. ಈ ಬಗೆಯ ಬ್ರಹ್ಮರು ಅಸಂಖ್ಯಾತರಾದುದರಿಂದ ಈ ಸೃಷ್ಟಿಪ್ರಳಯ ಪರಂಪರೆಗಳೂ ಬಿಡುವಿಲ್ಲದೆ ನಡೆಯುತ್ತಲೇ ಇರುತ್ತವೆಯೆಂದರಿಯಬೇಕು. ಎಂದರೆ ಕಾಲಚಕ್ರ ಬಿಡುವಿಲ್ಲದೆ ಯಾವಾಗಲೂ ತಿರುಗುತ್ತಲೇ ಇರುತ್ತದೆಂದು ಹೇಳಿದಂತಾಯಿತು (ವಿಷ್ಣುಪರಾಣ). 

	2 ಭೌದ್ಧಮತ: ಭಾರತದಲ್ಲಿಯೇ ಹುಟ್ಟಿದ ಬೌದ್ಧ ಮತಗ್ರಂಥಗಳಲ್ಲಿ ಈ ವಿಷಯವಾಗಿ ಹೇಳಿರುವುದನ್ನು ಗಮನಿಸಬಹುದು; ಪಾಳಿ ಭಾಷೆಯಲ್ಲಿರತಕ್ಕ ಮತದ ಮೂಲ ಗ್ರಂಥಗಳಲ್ಲಿ ಯುಗಗಳ ವಿಚಾರವಾಗಿ ಹೆಚ್ಚಿನ ವಿವರಗಳು ಇಲ್ಲ. ಈಚಿನ ಗ್ರಂಥಗಳಿಂದ ಕೆಲವು ಮುಖ್ಯ ವಿಷಯಗಳನ್ನು ಅರಿಯಬಹುದು.

	ಈ ಮತದಲ್ಲಿ ಎಲ್ಲಕ್ಕಿಂತಲೂ ದೊಡ್ಡದಾದ ಕಾಲವಿಭಾಗಕ್ಕೆ 'ಕಪ್ಪ (ಕಲ್ಪ) ಅಥವಾ ಮಹಾಕಪ್ಪ (ಮಹಾಕಲ್ಪ) ಎಂದು ಹೆಸರು. ಇದರಲ್ಲಿ (1) ಸಂವತ್ತಕಪ್ಪ (ಸಂವರ್ತಕಲ್ಪ) ಎಂದರೆ ಪ್ರಳಯಕಾಲ. (2) ಸಂವತ್ತಸ್ಥಾಯಿ (ಸಂವರ್ತಸ್ಥಾಯಿನ್)ಎಂದರೆ ಪ್ರಳಯಾವಸ್ಥೆ ಮುಂದುವರಿಯುತ್ತಿರುವ ಕಾಲ. (3) ವಿಪತ್ತ (ವಿವರ್ತ) ಎಂದರೆ ಸೃಷ್ಟಿಕಾಲ ಮತ್ತು (4) ಅಂಗುತ್ತರ ಎಂದರೆ ಪ್ರಪಂಚ ಇರುವ ಕಾಲ ಎಂಬ ನಾಲ್ಕು ಅಸಂಖ್ಯೆಯ ಕಪ್ಪಗಳು (ಅಸಂಖ್ಯೆಯ ಕಲ್ಪ) ಇರುತ್ತವೆ.

	ಸಂವತ್ತಕಪ್ಪದಲ್ಲಿ 64 ಚಕ್ರಗಳುಂಟು. ಎಂದರೆ ಪ್ರಪಂಚ ಏಳುಬಾರಿ ತೇಜಸ್ಸಿನಿಂದ ಸುಡಲ್ಪಟ್ಟು ಒಂದು ಬಾರಿ ಅಪ್ಪಿನಿಂದ (ನೀರಿನಿಂದ ನೆನೆಸಲ್ಪಡುತ್ತದೆ. ಪುನಃ ಏಳುಬಾರಿ ಸುಡಲ್ಪಡುವುದು. ಪುನಃ ನೆನೆಸಲ್ಪಡುವುದು. ಹೀಗೆಯೇ ನಡೆಯುತ್ತಾ ಬಂದು ಕಡೆಗೆ ವಾಯುವಿನಿಂದ ಶೋಷಿಸಲ್ಪಡುವುದು. ಹೀಗಾಗಿ ಈ ಭಾಜನಲೋಕ ಎಂದರೆ ಪ್ರಪಂಚ ನಾಶಹೊಂದುವುದು. ಇದಾದಮೇಲೆ ಶೂನ್ಯವಾದ ಈ ಸ್ಥಿತಿಯೇ ಎಷ್ಟೋಕಾಲ ಮುಂದುವರೆಯುವುದು. ಈ ಕಾಲವನ್ನು ಅಳೆಯಲಾಗುವುದಿಲ್ಲ.

	ಅನಂತರ, ಎಂದರೆ ಸಂವತ್ತಕಪ್ಪದಲ್ಲಿ ತಮ್ಮ ಪುಣ್ಯ ಬಲದಿಂದ ಮಾನವಲೋಕವನ್ನು ಬಿಟ್ಟು ಮೇಲಿನ ಲೋಕಗಳಿಗೆ ಹೋಗಿದ್ದ ಪ್ರಜೆಗಳ ಪುಣ್ಯ ತೀರಿಹೋಗಿ ಅವರು ಪುನಃ ಇಲ್ಲಿ ಜನ್ಮವೆತ್ತಬೇಕಾದ ಸಮಯ ಬಂದಾಗ ಈ ಭಾಜನಲೋಕ ಉಂಟಾಗುತ್ತದೆ. ನಾಲ್ಕನೆಯ ಕಲ್ಪಕ್ಕೆ ವಿವರ್ತಾವಸ್ಥಾ ಪ್ರಾಗವಸ್ಥಾ ಎಂದು ಹೆಸರು. ಇದರಲ್ಲಿ 30 ವಿಭಾಗಗಳುಂಟು. ಇವುಗಳಲ್ಲಿ ಮೊದಲನೆಯ ವಿಭಾಗದ ಆದಿಯಲ್ಲಿ ಮಾನವನ ಆಯುಸ್ಸು 80,000 ವರ್ಷಗಳಿದ್ದು ಕ್ರಮವಾಗಿ ಕಡಿಮೆಯಾಗುತ್ತಾ ಬಂದು ಕೊನೆಗೆ ವರ್ಷಗಳಿಗೆ 10 ವರ್ಷಗಳಿಗೆ ಇಳಿಯುತ್ತದೆ. ಕಡೆಯ ವಿಭಾಗದಲ್ಲಿ ಇದಕ್ಕೆ ಪ್ರತಿಯಾಗಿ 10 ವರ್ಷಗಳಿಂದ ಹೆಚ್ಚುತ್ತಾ ಹೋಗಿ ಕಡೆಗೆ 80,000 ವರ್ಷಗಳಿಗೆ ನಿಲ್ಲುತ್ತದೆ. ಉಳಿದ ಹದಿನೆಂಟು ವಿಭಾಗಗಳಲ್ಲಿ ಮೊದಲನೆಯ ಒಂಬತ್ತು ವಿಭಾಗಗಳಿಗೆ ಉತ್ಕರ್ಷಕಲ್ಪ ಅಥವಾ ಉಧ್ರ್ವಮುಖ ಕಲ್ಪವೆಂದೂ ಮತ್ತೆ ಒಂಬತ್ತು ವಿಭಾಗಗಳಿಗೆ ಅಪಕರ್ಷಕಲ್ಪವೆಂದೂ ಹೆಸರು. ಉತ್ಕರ್ಷ ಕಲ್ಪದಲ್ಲಿ ಮಾನವನ ಆಯುಸ್ಸು ಪುನಃ ಹತ್ತು ವರ್ಷದಿಂದ 80,000ವರೆಗೆ ಹೆಚ್ಚಿ ಅಪಕರ್ಷಕಾಲದಲ್ಲಿ ಅಲ್ಲಿಂದ ಹತ್ತಕ್ಕೆ ಇಳಿಯುತ್ತಾ ಬರುತ್ತದೆ. ಈ ಕಲ್ಪ ಮುಗಿಯುವ ಕಾಲಕ್ಕೆ ಈ ಲೋಕದಲ್ಲಿರುವ ಮುಕ್ಕಾಲೂ ಮೂರು ವೀಸಪಾಲಿನ ಪ್ರಾಣಿಗಳು ಹಸಿವು, ವ್ಯಾಧಿ, ಯುದ್ಧ ಮುಂತಾದವುಗಳಿಂದ ನಶಿಸಿ ಹೋಗುತ್ತದೆ. ಇನ್ನು ಕಳೆದುಳಿದುವುಗಳು ಬದಲಾಯಿಸಲ್ಪಟ್ಟು ಉತ್ಕರ್ಷಕಲ್ಪ ಪುನಃ ಪ್ರಾರಂಭವಾಗುವುದು.

	ಹೀಗೆ ಈ ಕಲ್ಪಗಳು ಯಾವಾಗಲೂ ಒಂದಾದ ಮೇಲೆ ಮತ್ತೊಂದು ಬರುತ್ತಲೇ ಇರುವುದರಿಂದ ಸಂಸಾರ ಅನಾದಿ ಮತ್ತು ಅನಂತವೆಂದು ಹೇಳಲಾಗಿದೆ. ಈ ಕಲ್ಪಗಳನ್ನೆಲ್ಲ ಸಾಮನ್ಯವಾಗಿ ಅಧರ್ಮವನ್ನು ನೀಗಿಸಿ ಧರ್ಮವನ್ನು ಸ್ಥಾಪಿಸುವ ಸಲುವಾಗಿ ಬುದ್ಧ ಅವತಾರಗಳನ್ನು ಎತ್ತುತ್ತ ಇರುತ್ತಾನೆ. ಈ ಅವತಾರಗಳ ಸಂಖ್ಯೆಯನ್ನನುಸರಿಸಿ ಕಲ್ಪಗಳಿಗೆ ಬೇರೆ ಬೇರೆ ಹೆಸರು ಕೊಡಲಾಗಿದೆ. ಆ ವ್ಯವಸ್ಥೆ ಹೀಗಿದೆ: ಬುದ್ಧನ ಅವತಾರವೇ ಇಲ್ಲದ ಕಲ್ಪ ಶೂನ್ಯಕಲ್ಪ, ಒಂದು ಅವತಾರವುಳ್ಳದ್ದು ಸಾಂಕಲ್ಪ, ಹೀಗೆಯೇ 2, 3, 4 ಮತ್ತು 5 ಅವತಾರಗಳನ್ನುಳ್ಳ ಕಲ್ಪಗಳಿಗೆ ಕ್ರಮವಾಗಿ ಮಂಡ, ವರ, ಸಾರಮಂಡ ಮತ್ತು ಭದ್ರಕಲ್ಪಗಳೆಂದು ಹೆಸರು.

	ಬೇರೆ ಬೇರೆ ಯುಗಗಳಲ್ಲಿ ಮನುಷ್ಯನ ಆಯುಸ್ಸು ಬೇರೆ ಬೇರೆ ಪ್ರಮಾಣದಲ್ಲಿ ಇರುವುದೆಂದೂ ಕಲಿಯುಗದ ಕೊನೆಯಲ್ಲಿ ಹೆಚ್ಚು ಪ್ರಾಣಿಗಳೆಲ್ಲ ನಾಶಹೊಂದಿ ಉಳಿದುವುಗಳು ಕೃತಯುಗದ ಧರ್ಮಗಳನ್ನು ಹೊಂದುವುದೆಂದು ವೈದಿಕರು ಹೇಳುವಂತೆ ಬೌದ್ಧರೂ ಹೇಳುತ್ತಾರೆಂಬುದು ಗಮನಿಸಬೇಕಾದ ಅಂಶ.

	3. ಬ್ಯಾಬಿಲಾನಿಯನ್: ಈಗ ಇರಾಕ್ ಎಂದು ಕರೆಯುವ ದೇಶದ ಒಂದು ಭಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ಬ್ಯಾಬಿಲಾನ್ ಎಂಬ ಪ್ರಸಿದ್ಧ ದೇಶವೊಂದು ಇತ್ತು. ಅಲ್ಲಿನ ಜನಗಳು ಅನೇಕ ಕಲೆಗಳಲ್ಲಿ ನಿಪುಣರಾಗಿದ್ದು ತತ್ತ್ವಚಿಂತಕರೂ ಆಗಿದ್ದರು. ಅವರ ಗ್ರಂಥಗಳಲ್ಲಿ ಯುಗಗಳ ವಿಚಾರ ಹೇಳಿದೆ. ಇವುಗಳಲ್ಲಿ ಪ್ರಳಯಕ್ಕೆ ಮೊದಲು ಇದ್ದ ರಾಜರು, ಪ್ರಳಯವಾದ ಮೇಲೆ ಹುಟ್ಟಿದ ರಾಜರು ಎಂದು ಎರಡು ಬಗೆಯ ದೊರೆಗಳ ವರ್ಣನೆ ಇದೆ. ಒಂದು ಕಾಲದಲ್ಲಿ ದೊಡ್ಡದೊಂದು ಜಲಪ್ರಳಯವುಂಟಾಯಿತು; ಇದಕ್ಕೆ ಮೊದಲು ಆ ದೇಶದ ಇತಿಹಾಸದಲ್ಲಿ ಪ್ರಸಿದ್ಧರಾದ ವೀರರೂ ಮತ್ತು (ವೈದಿಕ ಸಪ್ತರ್ಷಿಗಳಂತೆ) ಏಳುಮಂದಿ ಜ್ಞಾನಿಗಳೂ ವಾಸಮಾಡುತ್ತಿದ್ದರು. ಪ್ರಳಯಕಾಲದಲ್ಲಿ ಇವರೆಲ್ಲರೂ ಪಾತಾಳದ ಲೋಕಕ್ಕೋ ಸ್ವರ್ಗಲೋಕಕ್ಕೋ ಹೋಗಿ ಸೇರಿಕೊಂಡರು.

	ಪ್ರಳಯ ಸಮೀಪಿಸಿದುದನ್ನರಿತ ಕ್ರೋನೋಸ್ ಎಂಬ ದೇವತೆ ಎಲ್ಲಾ ಪ್ರಾಣಿಗಳ ಮತ್ತು ಪದಾರ್ಥಗಳ ಆದಿ, ಮಧ್ಯ ಮತ್ತು ಅಂತ್ಯಕಾಲಗಳ ಸ್ವರೂಪಸ್ಥ ಭಾಗಗಳನ್ನೆಲ್ಲಾ ಸಂಕೇತರೂಪವಾಗಿ ಕಲ್ಲಿನಲ್ಲಿ ಕೆತ್ತಿ ಸಿಪ್ಪಾರ್ ನದಿಯಲ್ಲಿ ಒಂದೆಡೆ ಸುರಕ್ಷಿತವಾಗಿ ಹೂತಿಡುವಂತೆ ಮಾಡಿ ಪ್ರಳಯ ಕಳೆದ ಮೇಲೆ ಈ ದೇವತೆಯ ಮಕ್ಕಳು ಅಲ್ಲಿಗೆ ಹೋಗಿ ಆ ಶಾಸನಗಳನ್ನೆಲ್ಲ ಶೋಧಿಸಿ ತೆಗೆದು ಅವನ್ನು ಎಲ್ಲೆಡೆಗಳಲ್ಲೂ ಪ್ರಚಾರಮಾಡಿದರು.

	ಸೃಷ್ಟಿಯ ಪ್ರಾರಂಭದಲ್ಲಿ, ಎಲ್ಲೆಲ್ಲಿಯೂ ಸತ್ಯ, ನ್ಯಾಯ, ಧರ್ಮ, ಸುಖ, ಶಾಂತಿಗಳೆ ನೆಲೆಸಿದ್ದವು. ಆದರೆ ಕಾಲ ಕಳೆದಂತೆ ಮನುಷ್ಯನಲ್ಲಿ ಸುಳ್ಳು, ಮೋಸ, ಕಪಟ ಮುಂತಾದವು ಹೆಚ್ಚುತ್ತ ಬರುವವು. ರಾಜರು, ಪ್ರಜೆಗಳು ಧರ್ಮದ ಕಾಯಿದೆಗಳನ್ನು ಮೀರುವರು. ಪರಸ್ಪರ ದ್ರೋಹವನ್ನೆಸಗುವರು. ತಾಯಿ ಮಕ್ಕಳು, ಅಣ್ಣತಮ್ಮಂದಿರು, ಸತಿಪತಿಯರು ಮುಂತಾದವರು ಸಹ ಪರಸ್ಪರ ದಯೆ ದಾಕ್ಷಿಣ್ಯಗಳಿಲ್ಲದೆ ಕ್ರೂರ ವರ್ತನೆಯುಳ್ಳವರಾಗುವರು. ಹೀಗಾಗಿ ಕೀಳು ಮೇಲಾದಾಗ ದೇವರ ಶಕ್ತಿ ಯಾವುದೋ ರೂಪದಲ್ಲಿ ಪ್ರಕಟವಾಗಿ, ಸಂಕಟಗಳೆಲ್ಲ ಪರಿಹಾರವಾಗುವುದು. ಅನಂತರ ಒಳ್ಳೆಯ ಕಾಲ ಬಂದು ಕಾಲಚಕ್ರ ಸುತ್ತುತ್ತಾ ಇರುತ್ತದೆ.

	4. ಕ್ರಿಶ್ಚಿಯನ್: ಸೃಷ್ಟಿಯ ಪ್ರಾರಂಭದಲ್ಲಿ ಮಾನವ ಶೀಲವಂತನಾಗಿ ಸುಖಿಯಾಗಿ ಇದ್ದನೆಂದು, ಕ್ರಮೇಣ ಅವನ ನಡೆನುಡಿಗಳು ಕೆಡುತ್ತಾ ಬಂದುದರ ಫಲವಾಗಿ ಅವನು ದುಃಖಿಯಾದನೆಂದು, ಕಡೆಕಡೆಗೆ ಅವನ ಸ್ಥಿತಿ ಸರಿಪಡಿಸಲಾರದಷ್ಟು ಕೆಟ್ಟುಹೋದುದರಿಂದ ದೇವರು ಈ ಪ್ರಪಂಚವನ್ನು ಪ್ರಳಯದ ಮೂಲಕ ನಾಶಪಡಿಸಿಬಿಟ್ಟನೆಂದು ಸಾಮಾನ್ಯವಾಗಿ ಎಲ್ಲರ ನಂಬಿಕೆ. ಆದರೆ ಕ್ರಿಸ್ತಮತದವರು ಈ ವಾದವನ್ನೊಪ್ಪುವುದಿಲ್ಲ. ಇದಕ್ಕೆ ಪ್ರತಿಯಾಗಿ ಅವರು ಹೇಳುವುದೇನೆಂದರೆ-ಜಗತ್ತಿನ ಸ್ಥಿತಿ ಉತ್ತಮವಾಗುತ್ತಾ ಬರಬೇಕಲ್ಲದೆ ಕೆಟ್ಟುಹೋಗಲು ಕಾರಣವಿಲ್ಲ. ಆದುದರಿಂದ ಮೊದಲು ಅಜ್ಞಾನ ಮತ್ತು ಅನಾಗರಿಕತೆಗಳಿಂದ ನರಳುತ್ತಿದ್ದ ಮಾನವ ಕ್ರಮೇಣ ಒಳ್ಳೆಯ ತಿಳಿವಳಿಕೆಯನ್ನು ಹೊಂದಿದ; ಅದರಿಂದ ತನ್ನ ನಡತೆಯನ್ನು ತಿದ್ದಿಕೊಂಡನೆಂದು ಕೊನೆಗೆ ತನ್ನ ಪ್ರಯತ್ನದಲ್ಲಿ ಸಫಲವಾಗಿ ಪೂರ್ಣವಾದ ಸುಖಶಾಂತಿ ಪಡೆಯುತ್ತಾನೆಂದು ಹೇಳುತ್ತಾರೆ.

	ಬಸ್ಸೂಟ್ ಎಂಬಾತ ಮಾನವನ ಚರಿತ್ರೆಯಲ್ಲಿ ಏಳು ಯುಗಗಳನ್ನು ತೋರಿಸಿರುತ್ತಾನೆ. (1) ಆಡಮ್‍ನಿಂದ ನೋವಾನವರೆಗೆ (ಆಡಮ್ ದೇವರಿಂದ ಸೃಷ್ಟಿಸಲ್ಪಟ್ಟ ಮೊದಲ ಮಾನವ; ನೋವಾ ಒಂದು ದೋಣಿಯಲ್ಲಿ ಜನರನ್ನೂ ಪ್ರಾಣಿಗಳನ್ನೂ ತುಂಬಿ ಪ್ರಳಯದ ನೀರಿನಲ್ಲಿ ಅವು ನಶಿಸಿಹೋಗದಂತೆ ಕಾಪಾಡಿದವ); (2) ನೋವಾನಿಂದ ಎಬ್ರಹಾಮ್‍ನವರೆಗೆ (ಎಬ್ರಹಾಮ್ ಯೊಹೂದಿಯರ ಮೂಲ ಪುರುಷ). ಈ ಕಾಲದಲ್ಲಿ ಮನುಷ್ಯನಿಗೆ ತನ್ನ ಅಪರಾಧಕ್ಕಾಗಿ ಶಿಕ್ಷೆ ದೊರೆಯಲು ಪ್ರಾರಂಭವಾಯಿತು. ಜನರು ಒಬ್ಬರ ಮೇಲೊಬ್ಬರು ಯುದ್ಧಮಾಡಿ ರಾಜ್ಯವನ್ನು ಸ್ಥಾಪಿಸಲು ಪ್ರಾರಂಭಿಸಿದರು; (3) ಎಬ್ರಹಾಮಿನಿಂದ ಮೋಸಸ್‍ನವರೆಗೆ (ಮೋಸಸ್ ಕಾನೂನುಗಳನ್ನು ಮಾಡಿ ಯೆಹೂದಿಗಳನ್ನು ಆಳಿದ ಪ್ರಸಿದ್ಧ ನಾಯಕ; ಹಳೆಯ ಒಡಂಬಡಿಕೆ (ಓಲ್ಡ್ ಟೆಸ್ಟಮೆಂಟ್) ಎಂಬ ಗ್ರಂಥ ಇವನ ಕಾಲದಲ್ಲಿ ಬರೆಯಲ್ಪಟ್ಟಿತು; (4) ಮೋಸಸ್‍ನ ಕಾಲದಿಂದ ಸಾಲೊಮನ್ ದೊರೆ ಜೆರುಸಲೇಮಿನ ದೇವಾಲಯ ಕಟ್ಟಿಸಿದವರೆಗಿನ ಕಾಲ (ಜೆರುಸಲೇಮ್ ಪ್ಯಾಲಸ್ತೀನ್ ದೇಶದ ರಾಜಧಾನಿ; ಇದು ಯೆಹೂದಿಯರಿಗೂ ಕ್ರಿಶ್ಚಿಯನ್ನರಿಗೂ ಮುಸಲ್ಮಾನರಿಗೂ ಪವಿತ್ರವಾದ ಯಾತ್ರ ಸ್ಥಳ. ಇದನ್ನು ಕಟ್ಟಿಸಿದ ಸಾಲೋಮನ್ ದೊರೆ ಕ್ರಿ.ಪೂ. ಹತ್ತನೆಯ ಶತಮಾನದಲ್ಲಿದ್ದು ಜಾಣತನಕ್ಕೆ ಪ್ರಸಿದ್ಧನಾಗಿದ್ದ. (5) ಬ್ಯಾಬಿಲಾನ್ ಪಟ್ಟಣದ ವಿನಾಶದವರೆಗೆ (ಬ್ಯಾಬಿಲಾನ್, ಬ್ಯಾಬಿಲಾನಿಯ ದೇಶವು ಬಹಳ ಸುಂದರವಾದ ಕಟ್ಟಡಗಳಿಂದ ಉದ್ಯಾನವನಗಳಿಂದ ಕೂಡಿದ ಸಮೃದ್ಧವಾದ ರಾಜಧಾನಿ); (6) ಸೈರೆಸ್‍ನಿಂದ ಯೇಸುಕ್ರಿಸ್ತನವರೆಗಿನ ಕಾಲ (ಸೈರಸ್ ಪರ್ಷಿಯನ್ ಸಾಮ್ರಾಜ್ಯ ಸ್ಥಾಪಿಸಿದ ರಾಜ); (7) ಅಲ್ಲಿಂದೀಚಿನ ಕಾಲ.

	ವೀಕೋ ಎಂಬ ಲೇಖಕ ಮೂರು ಯುಗಗಳನ್ನು ವರ್ಣಿಸಿರುತ್ತಾನೆ; (1) ಧರ್ಮಯುಗ ಅಥವಾ ದೇವಯುಗ; ಈ ಕಾಲದಲ್ಲಿ ಮಾನವ ತನ್ನ ನಾಗರಿಕತೆಯ ಶೈಶವಾವಸ್ಥೆಯಲ್ಲಿರುತ್ತಾನೆ; ಧರ್ಮಗುರುಗಳ ಆಜ್ಞೆಯಂತೆ ಜನರು ನಡೆದುಕೊಳ್ಳಬೇಕಾಗುವುದು. (2) ವೀರಯುಗ; ಇದರಲ್ಲಿ ಶೂರರಾದ ರಾಜರು ಪ್ರಜೆಗಳನ್ನು ತಮ್ಮ ಬಲದಿಂದ ಆಳಿ ಅವರ ಮೇಲೆ ತಮ್ಮ ಶಾಸನವನ್ನು ಸ್ಥಾಪಿಸುವರು. (3) ಮಾನವಯುಗ: ಈ ಕಾಲದಲ್ಲಿ ಮಾನವ ನಾಗರಿಕತೆಯಲ್ಲಿ ಮುಂದುವರಿಯುತ್ತಾ ಬರುತ್ತಾನೆ.

	5. ಈಜಿಪ್ಷಿಯನ್: ಈಜಿಪ್ಟ್ ದೇಶದವರು ಯುಗಗಳ ವಿಷಯಕ್ಕೆ ಹೆಚ್ಚಾಗಿ ಗಮನವನ್ನು ಕೊಡಲಿಲ್ಲವೆಂದು ತೋರುತ್ತದೆ. ಮಾನೆಟೋ ಎಂಬಾತ ಹಿಂದಿನ ಕಾಲದ ಈಜಿಪ್ಟಿನ ಇತಿಹಾಸ ಬರೆಯುತ್ತಾ ಆ ಕಾಲದಲ್ಲಿದ್ದ ದೇವತೆಗಳ ಎರಡು ವಂಶಗಳನ್ನು, ಅನಂತರ ಮತ್ತೆ ಯಾವುದೋ ನಾಲ್ಕು ವಂಶಗಳನ್ನು ಮತ್ತು ಕಡೆಗೆ ಉಪದೇವತೆಗಳ ವಂಶವೊಂದನ್ನು ವರ್ಣಿಸಿರುತ್ತಾನೆ. ಈ ಕಾಲದಲ್ಲಿ ಎಲ್ಲೆಡೆ ಸುಖಸಂತೋಷಗಳು ನಲಿದಾಡುತ್ತಿದ್ದವೆಂದು ತೋರುತ್ತದೆ. ಆದರೂ ಈ ದೇವತೆಗಳ ಚರಿತ್ರೆಯಲ್ಲಿ ದ್ವೇಷ, ಅಸೂಯೆ, ಮೋಸ ಮುಂತಾದ ಅನೇಕ ದುರ್ಗುಣಗಳು ತುಂಬಿದ್ದವು.

	(6) ಗ್ರೀಕ್ ಮತ್ತು ರೋಮನ್: ಇದಕ್ಕೆ ಪ್ರತಿಯಾಗಿ ಗ್ರೀಕರು, ರೋಮನ್ನರೂ ಈ ವಿಷಯದಲ್ಲಿ ಬಹಳ ವಿಮರ್ಶೆ ಮಾಡಿರುವುದು ತಿಳಿಯುತ್ತದೆ. ಇವರ ಪ್ರಕಾರ ಮಾನವ ಮೊದಲು ಒಳ್ಳೆಯ ಗುಣಗಳಿಂದ, ಸುಖಸಂತೋಷಗಳಿಂದ ಪೂರ್ಣನಾಗಿದ್ದು ಕ್ರಮೇಣ ಆ ದರ್ಜೆಯಿಂದ ಕೆಳಗಿಳಿದನೆಂದು ಅಭಿಪ್ರಾಯಪಡುತ್ತಾರೆ. ಮೊದಲು ಎಂದರೆ ಕ್ರೋನೋಸನು ಸ್ವರ್ಗದಲ್ಲಿ ಆಳುತ್ತಿದ್ದಾಗ ದೇವತೆಗಳು ಸ್ವರ್ಣಯುಗದ ಮಾನವರನ್ನು ಸೃಷ್ಟಿಸಿದರು. ಇವರು ದೇವತೆಗಳಂತೆ ಯಾವಾಗಲೂ ಸುಖಸಂತೋಷಗಳಲ್ಲಿ ಕಾಲಕಳೆಯುತ್ತಿದ್ದರು. ಇವರು ಯಾವುದಕ್ಕೂ ಕಷ್ಪಪಡಬೇಕಾಗಿರಲಿಲ್ಲ. ಭೂಮಿ ಇವರಿಗೆ ಬೇಕಾದ ಭೋಗಭಾಗ್ಯಗಳನ್ನೆಲ್ಲ ನೀಡುತ್ತಿತ್ತು. ಮುಪ್ಪು ಕೂಡ ಇವರ ಬಳಿ ಸುಳಿಯುತ್ತಿರಲಿಲ್ಲ. ಸುಖನಿದ್ರೆ ಮಾಡುವಂತೆಯೇ ಇವರು ಕಷ್ಟವಿಲ್ಲದೆ ಮರಣಹೊಂದಿ ಮೇಲು ಲೋಕಕ್ಕೆ ಹೋಗಿ ಅಲ್ಲಿ ವಾಸಮಾಡುತ್ತಾ ಭೂಲೋಕದ ಜನತೆಯನ್ನು ಕಾಪಾಡುತ್ತಿದ್ದರು.

	ಈ ಯುಗ ಕಳೆದ ಮೇಲೆ ರಜತಯುಗ ಪ್ರಾರಂಭವಾಯಿತು. ಈ ಯುಗದ ಜನರು ದೇವತೆಗಳನ್ನು ಪೂಜಿಸದೆ ಒಬ್ಬರೊಡನೊಬ್ಬರು ಹೊಡೆದಾಡುತ್ತಲಿದ್ದರು. ಇದರ ಫಲವಾಗಿ ಇವರು ನೂರು ವರ್ಷಗಳು ಮಾತ್ರ ಮಕ್ಕಳಂತೆಯೇ ಇದ್ದು ಮೃತ್ಯುವಶವಾದರು. ಆದರೂ ಅನಂತರದಲ್ಲಿ ಇವರು ಒಳ್ಳೆಯ ಜನ್ಮ ಪಡೆದರು. 

	ಇದಾದ ಮೇಲೆ ಕಂಚಿನ ಯುಗದ ಮನುಷ್ಯರು ಸೃಷ್ಟಿಗೊಂಡರು. ಇವರು ಬಲಶಾಲಿಗಳಾಗಿ ಭಯಂಕರರಾಗಿದ್ದು ದಯೆ ಎಂದರೇನೆಂಬುದನ್ನೇ ಕಾಣದೆ, ಯಾವಾಗಲೂ ಯುದ್ಧ ಮುಂತಾದ ಕ್ರೂರ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಇವರ ಆಯುಧಗಳು ಮನೆಮಠಗಳು, ಕಂಚಿನವಾಗಿದ್ದವು. ಇವರ ಕಾಲದಲ್ಲಿ ಕಬ್ಬಿಣ ಇರಲಿಲ್ಲ. ಮರಣಾನಂತರ ಇವರೆಲ್ಲರೂ ನರಕಕ್ಕೆ ದೂಡಲ್ಪಟ್ಟರು.

	ಅನಂತರ ಇವರಿಗಿಂತ ಶ್ರೇಷ್ಠರಾದ, ಉಪದೇವತೆಗಳೆಂದು ಕರೆಯಲ್ಪಡಬಹುದಾದ ಮತ್ತೊಂದು ಬಗೆಯ ಜನರ ವಂಶ ಸೃಷ್ಟಿಗೊಂಡಿತು. ಇವರೇ ಟ್ರಾಯ್, ಥೀಬ್ಸ್ ಮುಂತಾದ ಸ್ಥಳಗಳಲ್ಲಿ ಯುದ್ಧಮಾಡಿ ಪ್ರಸಿದ್ಧರಾದ ಮಹಾವೀರರು. ಇವರು ಮರಣಹೊಂದಿದ ಮೇಲೆ ಭೂಮಿಯ ಮೇಲೆ ಒಂದು ಕೊನೆಯಲ್ಲಿ ಒಂದು ಒಳ್ಳೆಯ ಸ್ಥಾನದಲ್ಲಿ ಜನ್ಮ ಪಡೆದು, ಅಲ್ಲಿ ಯಾವ ತೊಂದರೆಯೂ ಇಲ್ಲದೆ ಸುಖವಾಗಿರುತ್ತಿದ್ದರು. ಇವರಿಗೆ ಬೇಕಾದ ಹಣ್ಣು ಹಂಪಲು ಮೊದಲಾದುವುಗಳ ಸಮೃದ್ಧಿಯನ್ನು ವರ್ಷಕ್ಕೆ ಮೂರು ಬಾರಿ ಭೂಮಿ ಒದಗಿಸಿಕೊಡುತ್ತಿತ್ತು.
ಆದರೆ ಹೀಗೆ ಯುಗಗಳನ್ನು ಎಣಿಸಿರುವುದರಲ್ಲಿ ಈಚಿನ ಕಾಲ ಬಿಟ್ಟು ಹೋಗಿರುತ್ತದೆ. ಇದನ್ನೂ ಸೇರಿಸಿಕೊಂಡರೆ ಐದು ಯುಗಗಳಾಗುತ್ತವೆ. ಐದು ಯುಗಗಳೆಂದು ಕರೆಯುವ ರೂಢಿಯಿರುವುದಿಲ್ಲ.
7 ಯೆಹೂದಿ : ಪ್ರಪಂಚ ಸೃಷ್ಟಿಯಾಗುವ ಮುನ್ನ ಏಳು ಪದಾರ್ಥಗಳು ಸೃಷ್ಟಿಯಾದವು-ಧರ್ಮ, ಪಶ್ಚಾತ್ತಾಪ. ಈಡನ್ನಿನ (ಸ್ವರ್ಗದ) ತೋಟ, ನರಕ, ಕೀರ್ತಿಸಿಂಹಾಸನ, ದೇವಸ್ಥಾನ ಮತ್ತು ನಾಯಕನ ಹೆಸರು. ಆಡಮ್‍ಗೆ ಮೊದಲು 974 ತಲೆಮಾರುಗಳು ಕಳೆದಿದ್ದುವು. ಆಡಮ್‍ನಿಂದ ಮೋಸಸ್‍ವರೆಗೆ 26 ತಲೆಮಾರುಗಳಾದವು. ಒಟ್ಟು ಮೊದಲಿನಿಂದ 1000 ತಲೆಮಾರುಗಳಾದವು. ಕಾಲದ ಚಿಂತನೆಯನ್ನು ಮಾಡುವುದು ತರವಲ್ಲವೆಂದು ಯೆಹೂದಿ ಗ್ರಂಥಗಳು ಹೇಳುತ್ತವೆ.

	8 ಜರುತುಷ್ಟ್ರ : ಪರ್ಷಿಯ ಅಥವಾ ಇರಾಕ್ ದೇಶದ ಗ್ರಂಥಗಳಲ್ಲಿ ಕಾಲ ಅನಾದಿ ಮತ್ತು ಅನಂತವೆಂದು ಹೇಳಿದೆ. ಇದರಲ್ಲಿ ಸೃಷ್ಟಿ ಕಾಲ 12,000 ವರ್ಷಗಳು. ಇದು ನಾಲ್ಕು ಯುಗಗಳಾಗಿ ವಿಭಾಗಿಸಲ್ಪಟ್ಟಿರುತ್ತದೆ. ದೇವರು ಮೊದಲು ತನ್ನ ಶಕ್ತಿಯಿಂದ ಪ್ರಾಣಿಗಳನ್ನು ಸೃಷ್ಟಿಸಿದಾಗ ಅವು 3,000 ವರ್ಷಗಳ ಕಾಲ ಚಿಂತಿಸದೆ, ಚಲಿಸದೆ ಅಥವಾ ಮತ್ತೇನನ್ನೂ ಮಾಡದೆ ಸ್ತಬ್ಧವಾದ ಸ್ಥಿತಿಯಲ್ಲಿದ್ದವು; ಆಗ ಆಸುರೀ ಶಕ್ತಿಯು ಸ್ತಬ್ಧವಾಗಿತ್ತು. ಆದರೆ ಅನಂತರ ಅದು ತಲೆಯೆತ್ತಲಾರಂಭಿಸಿತು. ಆಗ ದೇವ ಅಸುರನನ್ನು ಕುರಿತು `ನಿನ್ನ-ನಮ್ಮ ಕಲಹ 9000 ವರ್ಷಗಳು ಕಳೆದ ಮೇಲೆ ಒಂದು ಸಮಯದಲ್ಲಿ ನಡೆಯುವಂತೆ ಏರ್ಪಡಿಸಿಕೊಳ್ಳವ ಎಂದು ಹೇಳಿದ. ಅಸುರ ಅದಕ್ಕೆ ಒಪ್ಪಿಕೊಂಡ. ಮೊದಲು 3,000 ವರ್ಷಗಳವರೆಗೆ ಎಲ್ಲವೂ ದೇವನ ಇಷ್ಟದಂತೆ ನಡೆಯುತ್ತಿದ್ದವು. ಅನಂತರ 3,000 ವರ್ಷಗಳವರೆಗೆ ದೇವ, ಅಸುರ ಇವರಿಬ್ಬರ ಇಷ್ಟದಂತೆ ನಡೆದವು. ಕಡೆಯ 3,000 ವರ್ಷಗಳು ಕಳೆದಕೂದಲೆ ಅಸುರನ ಶಕ್ತಿ ನಿಶ್ಯೇಷವಾಗಿ ಕ್ಷಯಿಸಿ ಅವನ ಆಟವೇನೂ ನಡೆಯದೆ ಹೋಯಿತು. ಈ ವಿಷಯವನ್ನು ಸರ್ವಜ್ಞನಾದ ದೇವ ಮೊದಲೇ ತಿಳಿದಿದ್ದುದರಿಂದ 9,000 ವರ್ಷಗಳ ಒಡಂಬಡಿಕೆ ಮಾಡಿಕೊಂಡ.						
   (ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ